ಪ್ರಯಾಪ್ಯುಲಿಡ 
	ಹುಳುಗಳಂತೆ ಕಾಣುವ ಸಾಗರವಾಸಿ ಪ್ರ್ರಾಣಿಗಳನ್ನು ಒಳಗೊಂಡಿರುವ ವಿಭಾಗ. ಇದೊಂದು ವಿಶಿಷ್ಟ ಗುಂಪು. ಇದಕ್ಕೆ ಸೇರಿದ ಪ್ರಾಣಿಗಳು ತಮ್ಮ ಗುಣ ಲಕ್ಷಣಗಳಲ್ಲಿ ಆಸ್ಕೆಲ್ಮಿಂತೀಸ್ ವಿಭಾಗದ ಕೈನೊರಿಂಕಿಡೀ ಗುಂಪಿನ ಪ್ರಾಣಿಗಳನ್ನು ಹೋಲುತ್ತವೆ. ಇನ್ನು ಕೆಲವು ಗುಣಲಕ್ಷಣಗಳಲ್ಲಿ ಅನೆಲಿಡದ ಪ್ರಾಣಿಗಳನ್ನೂ ಎಕೈನೊಡರ್ಮೇಟದವನ್ನೂ ಹೋಲುವುವು. ಇದರಿಂದಾಗಿ ಪ್ರಯಾಪ್ಯುಲಿಡ ವಿಭಾಗವನ್ನು ಹಿಂದೆ ಆಸ್ಕೆಲ್ಮಿಂತೀಸ್ ವಿಭಾಗಗಳ ವರ್ಗವೆಂದೂ ಬಗೆಯಲಾಗಿತ್ತು. ಆದರೆ ಈ ಗುಂಪನ್ನು ಕುರಿತು ಹೆಚ್ಚು ಅಧ್ಯಯನ ನಡೆಯುತ್ತ ಬಂದಂತೆ ಇವುಗಳ ವಿಶಿಷ್ಟತೆ ಹೆಚ್ಚು ಸ್ಪಷ್ಟವಾಗತೊಡಗಿ ಈಗ ಇದನ್ನು ಪ್ರತ್ಯೇಕ ವಿಭಾಗವೆಂದು ಪರಿಗಣಿಸಲಾಗಿದೆ.

	ಇದರಲ್ಲಿ ಪ್ರಯಾಪ್ಯುಲಸ್ ಮತ್ತು ಹ್ಯಾಲಿಕ್ರಿಪ್ಟಸ್ ಎಂಬ ಎರಡು ಜಾತಿಗಳಿವೆ. ಪ್ರಯಾಪ್ಯುಲಸ್ ಜಾತಿಯಲ್ಲಿ ನಾಲ್ಕು ಪ್ರಭೇದಗಳಿದ್ದರೆ ಹ್ಯಾಲಿಕ್ರಿಪ್ಟಸ್‍ನಲ್ಲಿ ಒಂದೇ ಒಂದು ಪ್ರಭೇದವಿದೆ.

	ಈ ಪ್ರಾಣಿಗಳ ಸರಾಸರಿ ಉದ್ದ ಸುಮಾರು 5 ಸೆಂಮೀ. ಆದರೆ ಕೆಲವೊಮ್ಮೆ 15 ಸೆಂಮೀ. ಉದ್ದ ಇರುವುದೂ ಉಂಟು. ಇವು ಗಾತ್ರದಲ್ಲಿ ಚಿಕ್ಕವು. ಕೊಳವೆಯಾಕಾರದಲ್ಲಿವೆ. ದೇಹದಲ್ಲಿ ಖಂಡ ವಿಂಗಡಣೆ ಇಲ್ಲ. ಪ್ರಯಾಪ್ಯುಲಸ್ ಪ್ರಾಣಿಯ ದೇಹದಲ್ಲಿ ಸೊಂಡಿಲು (ಪ್ರೊಬಾಸಿಸ್). ಮಧ್ಯಭಾಗ (ಟ್ರಂಕ್) ಮತ್ತು ಬಾಲದ ಅನುಬಂಧ (ಕಾಡಲ್ ಅಪೆಂಡೇಜ್) ಎಂಬ ಮೂರು ಭಾಗಗಳನ್ನು ಗುರುತಿಸಬಹುದು. ಬಾಲದ ಅನುಬಂಧದಲ್ಲಿ ಉಪಾಂಗಗಳಿವೆ. ಆದರೆ ಹ್ಯಾಲಿಕ್ರಿಪ್ಟಸ್ ಪ್ರಾಣಿಯ ಬಾಲದ ಅನುಬಂಧದಲ್ಲಿ ಯಾವ ತೆರನ ಉಪಾಂಗಗಳೂ ಇಲ್ಲ.

	ಎರಡಲ್ಲೂ ದೇಹದ ಹೊರಭಾಗ ಬಲವಾದ ಸ್ನಾಯುಗಳಿಂದ ಕೂಡಿದೆ. ದೇಹದ ಹೊರಭಾಗದಲ್ಲಿ ಗಂಟುಗಳಿವೆ. ಸೊಂಡಲಿನ ಮೇಲೆ ಸಾಲುಸಾಲಾಗಿ ಜೋಡಣೆ ಗೊಂಡ ಮುಳ್ಳುಗಳ ಸಮೂಹ ಇದೆ. ಸೊಂಡಿಲಿನ ಮುಂಭಾಗವೇ ಬಾಯಿ, ಬಾಯಸುತ್ತ ಹರಿತವಾದ ಅನೇಕ ಹಲ್ಲುಗಳುಂಟು. ಈ ಗುಂಪಿನ ಪ್ರಾಣಿಗಳ ಫ್ಯಾರಿಂಕ್ಸ್ ರಚನೆ ವಿಶಿಷ್ಟವಾದ್ದು. ಪ್ರಾಣಿಯ ಇಷ್ಟಕ್ಕೆ ಅನುಗುಣವಾಗಿ ಇದು ಹಿಂದಕ್ಕೂ ಮುಂದಕ್ಕೂ ಚಲಿಸುತ್ತದೆ. ಅಲ್ಲದೆ ಫ್ಯಾರಿಂಕ್ಸಿನಲ್ಲೂ ಹಲ್ಲುಗಳುಂಟು. ದೇಹದ ಮಧ್ಯಭಾಗದ ಒಳಗೆ ಹರಡಿಕೊಂಡಂತೆ ಇರುವ ಪ್ರತಿಕರ್ಷಕ ಸ್ನಾಯುಗಳು ಫ್ಯಾರಿಂಕ್ಸನ್ನು ನಿಯಂತ್ರಿಸುವುವು. ಫ್ಯಾರಿಂಕ್ಸ್‍ನಂತೆ ಸೊಂಡಿಲು ಕೂಡ ಹಿಂದಕ್ಕೆ ಅಥವಾ ಮುಂದಕ್ಕೆ ಚಾಚುವ ಸಾಮಥ್ರ್ಯ ಪಡೆದಿದೆ. ಈ ಗುಣ ಲಾರ್ವಹಂತದಲ್ಲೇ ಗೋಚರಿಸುತ್ತದೆ.

ಪ್ರಯಾಪ್ಯುಲಿಗದ ಲಾರ್ವ ರ್ಯಾಟಿಫರ್ ಲಾರ್ವವನ್ನು ಹೋಲುತ್ತದೆ.	
(ಎಂ.ಎನ್.ವಿಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ